ಕೃಷಿ

ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರ ಅಂಕಿತ.

ಬೆಂಗಳೂರು:- ವಿಧಾನಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ಪಡೆಯಲಾಗಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ 2020ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ.

ವಿರೋಧದ ನಡುವೆಯೂ ರಾಜ್ಯದಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕ ಜಾರಿಗೆ ಬಂದಂತಾಗಿದೆ. ಕೇಂದ್ರ ಸರ್ಕಾರದ ಕಾಯ್ದೆಗೆ ಅನುಗುಣವಾಗಿ ರಾಜ್ಯದ ರೈತರು ಎಪಿಎಂಸಿಯಲ್ಲಿ ಅಥವಾ ಎಪಿಎಂಸಿಯಿಂದ ಹೊರಗೆ ಎಲ್ಲಿ ಬೇಕಾದರೂ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ.

1966ರ ಕಾಯಿದೆಯನ್ನು ತಿದ್ದುಪಡಿ ಮಾಡಿದ್ದು ಕಾಯಿದೆಯ 27 (2) ನಿಯಮದ ಪ್ರಕಾರ ಮಾರುಕಟ್ಟೆಯ ಸಮಿತಿಯು ಮಾರುಕಟ್ಟೆಪ್ರಾಂಗಣಗಳಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸಬೇಕು ಎಂಬ ನಿಯಮವನ್ನು ಉಳಿಸಿಕೊಳ್ಳಲಾಗಿದೆ. 27(3) ನಿಯಮವನ್ನು ಕೈ ಬಿಟ್ಟಿದ್ದು ಈ ಮೂಲಕ ಮಾರುಕಟ್ಟೆಪ್ರಾಂಗಣದ ಹೊರಗಡೆ ನಡೆಯುವ ಕೃಷಿ ಉತ್ಪನ್ನ ಮಾರಾಟ ಅಥವಾ ವಹಿವಾಟುಗಳನ್ನು ನಿಯಂತ್ರಿಸುವ ಹಕ್ಕನ್ನು ಮಾರುಕಟ್ಟೆಸಮಿತಿಗಳಿಂದ ಕಿತ್ತುಕೊಳ್ಳಲಾಗಿದೆ.

117ನೇ ನಿಯಮದ ತಿದ್ದುಪಡಿಯಂತೆ ಎಪಿಎಂಸಿ ಮಾರುಕಟ್ಟೆಗಳಲ್ಲದೆ ಯಾವುದೇ ವ್ಯಕ್ತಿಯು ಸ್ಥಳೀಯ ನಿಯಮಗಳನ್ನು ಪಾಲಿಸಿ ಮಾರುಕಟ್ಟೆಸ್ಥಳವನ್ನು ಸೃಷ್ಟಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ಎರಡನೇ ತಿದ್ದುಪಡಿ)ಯನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ತೀವ್ರ ವಿರೋಧದ ನಡುವೆಯೇ ಎಪಿಎಂಸಿ ಸುಧಾರಣೆ ಕಾಯಿದೆ ರಾಜ್ಯದಲ್ಲಿ ಅಂತಿಮ ಅಂಗೀಕಾರ ಪಡೆದಂತಾಗಿದೆ.

Related Articles

Leave a Reply

Your email address will not be published. Required fields are marked *

You cannot copy content of this page