ರಾಜ್ಯ

ರಾಜ್ಯದಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆ: ಅಗತ್ಯ ವಸ್ತು ತರಲು ವಾಹನ ಬಳಕೆಗೆ ಅವಕಾಶ

ಬೆಂಗಳೂರು :- ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ದಿನಸಿ, ತರಕಾರಿ ಸೇರಿದಂತೆ ಅಗತ್ಯವಸ್ತು ಖರೀದಿಸಲು ವಾಹನ ಬಳಸಬಹುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಸೋಮವಾರ ಸಂಜೆ ಈ ಕುರಿತು ಟ್ವೀಟ್ ಮಾಡಿದೆ.

ಮನೆ ಸಮೀಪದ ಅಂಗಡಿಗಳಿಂದ ದಿನಸಿ, ತರಕಾರಿ ಅಗತ್ಯ ವಸ್ತುಗಳ ಖರೀದಿಗೆ ಜನ ವಾಹನ ಬಳಸಬಹುದು. ಆದರೆ, ಬೇಕಾಬಿಟ್ಟಿಯಾಗಿ ಹೊರಗಡೆ ತಿರುಗಾಡುವಂತಿಲ್ಲ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ವಾಹನ ಬಳಸಬಹುದು.

ಈ ಮೊದಲು ನಡೆದುಕೊಂಡೇ ಹೋಗಿ ಅಗತ್ಯ ವಸ್ತುಗಳನ್ನು ತರಬೇಕು ಎಂದು ಸರ್ಕಾರ ಆದೇಶಿಸಿತ್ತು. ಇದರಿಂದ ಭಾರಿ ತೊಂದರೆಯಾಗಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ಕಿಲೋಮೀಟರ್ ದೂರದವರೆಗೂ ನಡೆದುಕೊಂಡು ಹೋಗಿ ಬರಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅಗತ್ಯ ವಸ್ತು ಖರೀದಿಗೆ ವಾಹನ ಬಳಸಬಾರದೆಂಬ ನಿಯಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ನಿಯಮ ಸಡಿಲಿಸಲಾಗಿದೆ.

ನಿಮ್ಮ ಹತ್ತಿರದ ಸ್ಥಳಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿ. ಅಗತ್ಯವಸ್ತು ಖರೀದಿಗೆ ಹಳ್ಳಿಗಳಿಂದ ಪಟ್ಟಣಕ್ಕೆ ಬರಬಹುದು. ತರಕಾರಿ, ಅಥವಾ ಅಗತ್ಯ ವಸ್ತುಗಳ ಖರೀದಿ ಮಾಡಲು ಮನೆ ಸಮೀಪದಲ್ಲಿ ವಾಹನ ಬಳಕೆ ಮಾಡಲು ನಿರ್ಬಂಧವಿಲ್ಲ. ಆದರೆ ಯಾರೂ ಸಹ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಈ ಮೂಲಕ ನೀಡಿರುವ ಅವಕಾಶವನ್ನು ದುರ್ಬಳಕೆ ಮಾಡಿಕೊಂಡರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿದಿನ ವಾಹನ ಬಳಸದೇ, ಅವಶ್ಯ ಸಂದರ್ಭದಲ್ಲಿ ಮಾತ್ರ ಹತ್ತಿರದ ಅಂಗಡಿಗೆ ತೆರಳಲು ವಾಹನ ಬಳಕೆ ಅವಕಾಶ ನೀಡಲಾಗಿದೆ ಎಂದು ಟ್ವೀಟ್​ನಲ್ಲಿ ತಿಳಿಸಲಾಗಿದೆ. ಎಲ್ಲರೂ ಮನೆಯಲ್ಲಿ ಸುರಕ್ಷತೆಯಿಂದಿರಿ ಎಂದು ಸಾರ್ವಜನಿಕರಲ್ಲಿ ರಾಜ್ಯ ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್​ ಸೂದ್​ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

You cannot copy content of this page