ರಾಜ್ಯ

60 ಲಕ್ಷ ಉದ್ಯೋಗ ಸೃಷ್ಟಿ ಗುರಿ; ಐಟಿ ವಲಯದಲ್ಲಿ ಹೊಸ ಕ್ರಾಂತಿ

ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣ ಪಡೆದವರ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಸರ್ಕಾರ ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಸ್ಟಾರ್ಟಪ್​ಗಳ ಸಂಖ್ಯೆ ಹೆಚ್ಚಿಸುವ ಮೂಲಕ ಉದ್ಯೋಗಾವಕಾಶಗಳನ್ನು ಗಣನೀಯವಾಗಿ ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ನೇರ ಮತ್ತು ಪರೋಕ್ಷವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಹೆಚ್ಚಿಸುವ ಸಲುವಾಗಿ ಕ್ಲಸ್ಟರ್ ರಚನೆ ಮಾಡಲಾಗುತ್ತಿದೆ. ಉದ್ಯಮಿಗಳನ್ನು ಒಳಗೊಂಡ ಕರ್ನಾಟಕ ಎಕಾನಮಿ ಡಿಜಿಟಲ್ ಮಿಷನ್ ಜಾರಿಗೆ ತರಲಾಗಿದ್ದು, ‘ಬೆಂಗಳೂರಿನಿಂದ ಆಚೆಗೂ’ ಎಂಬ ಕಲ್ಪನೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.

ಎಲ್ಲಿ, ಎಷ್ಟು ಅಂತರ?: ಸರ್ಕಾರ ತಜ್ಞರ ಮೂಲಕ ಗುರುತಿಸಿರುವ ಮಾಹಿತಿ ಪ್ರಕಾರ ಸೈಬರ್ ಸೆಕ್ಯುರಿಟಿ ವಲಯದಲ್ಲಿ 3 ಲಕ್ಷ, ಡಿಜಿಟಲ್ ಟೆಕ್ನಾಲಜಿಯಲ್ಲಿ 6 ಲಕ್ಷ ಉದ್ಯೋಗದ ಅಂತರಗಳಿವೆ. ಇಎಸ್​ಡಿಎಂ, ಎವಿಎಸಿಯಲ್ಲಿಯೂ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಈ ಉದ್ಯೋಗದ ಅವಕಾಶ ಈ ಎಲ್ಲ ವಲಯದಲ್ಲಿ ಹೆಚ್ಚಾಗಲಿವೆ ಎಂದೇ ಅಂದಾಜಿಸಲಾಗಿದೆ. ಇದಕ್ಕೆ ಪೂರಕವಾಗಿ ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ. ಯಾವ ವಲಯದಲ್ಲಿ ಅವಕಾಶ ಹೆಚ್ಚಿವೆಯೋ ಅಂತಹ ವಲಯಕ್ಕೆ ಸಂಬಂಧಿಸಿದಂತೆ ತರಬೇತಿ ಮೂಲಕ ಉದ್ಯೋಗಿಗಳನ್ನು ಸಜ್ಜುಗೊಳಿಸಲಾಗುತ್ತದೆ.

ಆಟೋಮೇಷನ್, ಏರೋಸ್ಪೇಸ್, ಡಿಫೆನ್ಸ್ ಹೀಗೆ ವಿವಿಧ ವಲಯಗಳನ್ನು ಬೆಂಗಳೂರಿನಿಂದ ಹೊರ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದೇವೆ. ಉದ್ಯೋಗಾವಕಾಶ ಹೆಚ್ಚಿಸುವುದು ನಮ್ಮ ಉದ್ದೇಶ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದೇವೆ.

| ಡಾ. ಸಿ.ಎನ್. ಅಶ್ವತ್ಥನಾರಾಯಣ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಸಚಿವ

ನಿರುದ್ಯೋಗದ ಪ್ರಮಾಣ: ರಾಜ್ಯದಲ್ಲಿ ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆದು ಹೊರ ಬರುತ್ತಿದ್ದಾರೆ. ಅದರಲ್ಲಿ ಶೇ.60 ಜನ ನಿರುದ್ಯೋಗಿಗಳಾಗುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶ ನೀಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವ ಕಾರ್ಯತಂತ್ರವನ್ನು ಸರ್ಕಾರ ರೂಪಿಸುತ್ತಿದೆ. ಉದ್ಯೋಗಗಳ ಸೃಷ್ಟಿಗೆ ಅವಕಾಶವಾಗುವಂತೆ ಮೂಲಸೌಕರ್ಯ ಅಭಿವೃದ್ಧಿ, ಹೂಡಿಕೆಗೆ ಅವಕಾಶ ಕಲ್ಪಿಸುವುದು, ಪ್ರತಿಭೆಗಳ ಅನ್ವೇಷಣೆ ಸೇರಿ ಎಲ್ಲವೂ ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಸಾಕಷ್ಟು ಅನ್ವೇಷಣೆಗಳು ನಡೆಯುತ್ತಿದ್ದು, ಅವು ಉದ್ಯಮವಾಗಿ ಸ್ಥಾಪನೆಗೆ ನೆರವು ನೀಡುವ ಮೂಲಕ ಉದ್ಯಮ ಹಾಗೂ ಉದ್ಯೋಗ ಎರಡಕ್ಕೂ ಪ್ರೋತ್ಸಾಹ ನೀಡಿ ಗುರಿ ಸಾಧನೆಗೆ ಸರ್ಕಾರ ಮುಂದಾಗಿದೆ.

ರಫ್ತು ಹೆಚ್ಚಳದ ಗುರಿ: ರಾಜ್ಯದ ಒಟ್ಟಾರೆ ಮಾಹಿತಿ ತಂತ್ರಜ್ಞಾನದ ರಫ್ತು ಸುಮಾರು 10 ಸಾವಿರ ಕೋಟಿ ರೂ. ಇದೆ. ಅದನ್ನು 5 ವರ್ಷದಲ್ಲಿ 50 ಸಾವಿರ ಕೋಟಿ ರೂ.ಗಳಿಗೆ ತರುವ ಉದ್ದೇಶವಿದೆ.

ಕ್ಲಸ್ಟರ್​ಗಳ ರಚನೆ: ಮಾಹಿತಿ ತಂತ್ರಜ್ಞಾನವನ್ನು ಬೆಂಗಳೂರಿನಿಂದ ಹೊರಗೆ ತೆಗೆದುಕೊಂಡು ಹೋಗಲು ಹಿಂದಿನಿಂದಲೂ ಸಾಕಷ್ಟು ಪ್ರಯತ್ನ ನಡೆದಿವೆ. ಆದರೆ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ. ಆದ್ದರಿಂದಲೇ ಈಗ ಆರು ಕ್ಲಸ್ಟರ್​ಗಳನ್ನು ರೂಪಿಸಿ ಅದರ ಮೂಲಕ ಐಟಿ ಕಂಪನಿಗಳನ್ನು ಬೆಂಗಳೂರಿನಿಂದ ಹೊರಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದೆ. ಒಂದೊಂದು ಕ್ಲಸ್ಟರ್​ನಲ್ಲಿ ಒಂದೊಂದು ವಿಷಯದ ಬಗ್ಗೆ ಆದ್ಯತೆ ನೀಡಲಾಗುತ್ತಿದೆ. ಮೂರು ಕ್ಲಸ್ಟರ್​ಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಮೈಸೂರು ಕ್ಲಸ್ಟರ್​ನಲ್ಲಿ ರಾಮನಗರ, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳನ್ನು ಸೇರಿಸಲಾಗಿದೆ. ಇಲ್ಲಿ ಸೈಬರ್ ಸೆಕ್ಯುರಿಟಿಗೆ ಅವಕಾಶ ನೀಡಲಾಗುತ್ತದೆ. ಮಂಗಳೂರು ಕ್ಲಸ್ಟರ್​ನಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಿವೆ. ಈ ಕ್ಲಸ್ಟರ್​ನಲ್ಲಿ ಫಿನ್​ಟೆಕ್ ವಿಷಯಕ್ಕೆ ಆದ್ಯತೆ ಇದೆ.

ಕ್ಲಸ್ಟರ್​ಗಳ ಸೇರ್ಪಡೆ: ಹುಬ್ಬಳ್ಳಿ ಕ್ಲಸ್ಟರ್ ವ್ಯಾಪ್ತಿಗೆ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಹಾಗೂ ಹಾವೇರಿ ಜಿಲ್ಲೆ ಸೇರಿದ್ದು, ಇಲ್ಲಿ ಅಗ್ರೋ ಟೆಕ್ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ. ಕಲಬುರಗಿ ಕ್ಲಸ್ಟರ್​ಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಳ್ಳಾರಿ ಜಿಲ್ಲೆ ಸೇರಿಸಲಾಗಿದೆ. ತುಮಕೂರು ಕ್ಲಸ್ಟರ್​ಗೆ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳು. ಶಿವಮೊಗ್ಗ ಕ್ಲಸ್ಟರ್​ಗೆ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಿವೆ.

ಒಂದು ವರ್ಷದ ಸಾಧನೆ

 • ಐಟಿ-ಬಿಟಿ ಹೂಡಿಕೆ 4826.90 ಕೋಟಿ ರೂ., 17968 ಉದ್ಯೋಗ
 • ಎಲೆಕ್ಟ್ರಾನಿಕ್ಸ್ 2728.40 ಕೋಟಿ ರೂ., 10321 ಉದ್ಯೋಗ
 • ಎಸ್​ಇಝುಡ್ 1.02 ಲಕ್ಷ ಕೋಟಿ ರೂ., 3.74 ಲಕ್ಷ ಉದ್ಯೋಗ

ಗುರಿ

 • ಮುಂದಿನ 5 ವರ್ಷದಲ್ಲಿ ಐಟಿ ರಫ್ತು 150 ಬಿಲಿಯನ್ ಡಾಲರ್ ಗುರಿ
 • ತಳಮಟ್ಟದಲ್ಲಿ ಸೆಂಟರ್ ಫಾರ್ ಎಕ್ಸಲೆನ್ಸ್​ಗಳ ಸ್ಥಾಪನೆ
 • ಬೆಂಗಳೂರು ಹೊರಗೆ 5 ಸಾವಿರ ಸ್ಟಾರ್ಟಪ್​ಗಳ ಸ್ಥಾಪನೆ

ತಳಮಟ್ಟದ ಅನ್ವೇಷಣೆ

 • ಚಿಕ್ಕಮಗಳೂರಿನ ನರಸಿಂಹ ಭಂಡಾರಿ ಅವರಿಂದ ಅಡಕೆ ಹೊಟ್ಟು ಹಾಕುವ ಯಂತ್ರ
 • ಬೆಂಗಳೂರಿನ ಶಿವಕುಮಾರ್ ಅವರಿಂದ ಕಡಿಮೆ ವೋಲ್ಟೇಜ್ ಬಳಸುವ ಹೀಟರ್
 • ಪುತ್ತೂರಿನ ಸುದರ್ಶನ್ ಅವರಿಂದ ಸಣ್ಣ ಕಂಪ್ಯೂಟರ್ ಕೀಬೋರ್ಡ್
 • ಧಾರವಾಡದ ಮಹಮದ್​ಗೌಸ್ ಅವರಿಂದ ಎಲ್​ಪಿಸಿ ಆಟೋ ಸ್ಟಾಪ್
 • ಮೈಸೂರಿನ ಸೋಮಸುಂದರ್ ಸಿಂಗ್ ಅವರಿಂದ ಮಾಲಿನ್ಯ ನಿಯಂತ್ರಣಕ್ಕೆ ಆಟೋ ಮೊಬೈಲ್
 • ಮೈಸೂರಿನ ಸಂತೋಷ್ ಅವರಿಂದ ವಿಶ್ವದ ಸಣ್ಣ ಇ-ಬೈಕ್

ಕ್ರಮಗಳೇನು?: 2026ರ ವೇಳೆಗೆ ಬೆಂಗಳೂರಿನ ಹೊರಗೆ 5000 ಸ್ಟಾರ್ಟಪ್​ಗಳನ್ನು ಹಾಗೂ 100 ದೊಡ್ಡ ಮಟ್ಟದ ಕಂಪನಿಗಳನ್ನು ಸ್ಥಾಪನೆ ಮಾಡುವ ಗುರಿ ಇದೆ. ಇದಕ್ಕೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮೂಲಕ ನೆರವು ನೀಡಲಾಗುತ್ತದೆ.

Related Articles

Leave a Reply

Your email address will not be published. Required fields are marked *

You cannot copy content of this page